ದೇವಾಂಗ ಸಂಘ ನಡೆದು ಬಂದ ದಾರಿ
ದೇವಾಂಗ ಜನಾಂಗವು ಬೆಂಗಳೂರಿನ ಮೂಲ ನಿವಾಸಿಗಳಾಗಿದ್ದು, ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜರ ಓಡೆಯರ ಕಾಲದಲ್ಲಿ ಕುಶಲಕರ್ಮಿಗಳನ್ನು ಕರೆಸಿ ಬಡಾವಣೆಗಳನ್ನು ನಿರ್ಮಿಸಿ ದೇವಾಂಗ ಜನಾಂಗದವರಿಗೆ ದೇವಾಂಗ ಪೇಟೆ ಎಂದು ಹೆಸರು ಕೊಟ್ಟು ಬಡಾವಣೆ ನಿರ್ಮಿಸಿದರು. ಕನ್ನಡ, ತೆಲುಗು ಮತ್ತು ಶಿವಾಚಾರ ದೇವಾಂಗದರವರು ಆ ಬಡಾವಣೆಯಲ್ಲಿ ಶೆಟ್ರು ಯಜಮಾನರನ್ನು ನೇಮಕ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದರು. ಈ ಮೂರು ಪಂಗಡಗಳ ಪ್ರಯತ್ನದ ಫಲವಾಗಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀ ರಾಮಲಿಂಗ ಚೌಡೇಶ್ವರಿ ದೇವಿ ದೇವಾಸ್ಥನ ನಿರ್ಮಾಣವಾಯಿತು. ಪ್ರತಿಯೊಂದು ಪಂಗಡದವರು 4 ತಿಂಗಳ ಪೂಜಾ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ದೇವಾಂಗ ಜನಾಂಗದವರು ತಮ್ಮ ಮನೆಗಳ ಶುಭ ಕಾರ್ಯದಲ್ಲಿ ಅಂದರೆ ವಿವಾಹ ಕಾಲದಲ್ಲಿ ವಧು ವರರನ್ನು ದೇವಾಸ್ಥಾನಕ್ಕೆ ಕರೆದುಕೊಂಡು ಹೋಗಿ ಕುಲದೇವತೆ ಆರ್ಶೀವಾದ ಪಡೆಯುತ್ತಿದ್ದರು.
1903 ರಲ್ಲಿ ದೇವಾಂಗ ಜನಾಂಗದ ಹತ್ತು ಮಂದಿ ಸೇರಿ ದಕ್ಷಿಣಕಾಶಿ ಎನಿಸಿದೆ ಗವೀಪುರದಲ್ಲಿ ಜವಳಿ ಅಂಗಡಿ ಬಿ.ಅಪ್ಪಾಜಪ್ಪ ನವರಿಂದ 94 ½ X 76 ½ ಅಡಿ ವಿಸ್ತೀರ್ಣದ ಖಾಲಿ ಜಮೀನನ್ನು ಕರಾರಿನಲ್ಲಿ ಪಡೆದು ಕೊಂಚ ಭಾಗವನ್ನು ತುಮಕೂರು ತಿಮ್ಮಯ್ಯ ನವರಿಗೆ ಛತ್ರವನ್ನು ಕಟ್ಟಲು ನೀಡಿ, ಉಳಿದ ಜಾಗವನ್ನು ದೇವಾಂಗ ಜನಾಂಗದ ಹತ್ತು ಮಂದಿ ಛತ್ರವನ್ನು ಕಟ್ಟಿದರು. ಮದುವೆ ಮುಂತಾದ ಶುಭ ಸಮಾರಂಭಗಳು ನಡೆಯುತ್ತಿದ್ದವು, ಅದಕ್ಕೂ ಮೊದಲು ವಿವಾಹದ ಶುಭ ಕಾರ್ಯಗಳು ಪ್ರತಿಷ್ಠಿತರ ಹಜಾರಗಳಲ್ಲಿ ನಡೆಯುತ್ತಿದ್ದವು. ಶೆಟ್ರು ಯಜಮಾನರ ಆಳ್ವಿಕೆಯಲ್ಲಿ ವಿವಾಹ ಮತ್ತು ಶುಭ ಕಾರ್ಯಗಳಲ್ಲಿ ಜನಾಂಗದವರು ಶೆಟ್ರು ಯಜಮಾನರುಗಳಿಗೆ ಕಾಣಿಕೆ, ಗೌರವ ನೀಡುತ್ತಿದ್ದರು. 28 ಪೇಟೆ ಶೆಟ್ರು ಯಜಮಾನರುಗಳಿದ್ದು ಅವರುಗಳಲ್ಲಿ ಜನಾಂಗದವರು ಸುಖ ಜೀವನ ನಡೆಸುತ್ತಿದ್ದರು. ನೇಕಾರಿಗೆ ಕುಲ ಕಸುಬು ವಿದ್ಯಾಭ್ಯಾಸ ಅಗಣ್ಯ ಈ ರೀತಿ ಜೀವನ ಸಾಗಿತ್ತು.
1920 ರಲ್ಲಿ ಬೆಂಗಳೂರಿನ ದೇವಾಂಗ ಜನಾಂಗದ ಮುಂದಾಳುಗಳಾಗಿದ್ದ ಯಜಮಾನ್ ಎಣ್ಣೆಗೆರೆ ಚಿಕ್ಕವೆಂಕಟಪ್ಪ, ಡಿ.ಆದೆಪ್ಪ, ಮರಡಿ ಸುಬ್ಬಯ್ಯು, ಮುನಿಸುಬ್ಬರಾಯಪ್ಪ ಸೌದೆ ಅಂಗಡಿ ಚೌಡಪ್ಪ, ಮಹಡಿಮನೆ ಯಜಮಾನ್ ಮುನಿಶಂಕರಪ್ಪ, ಚಾಮರಾಜಪೇಟೆ ಬಸಯ್ಯ, ಗಂಟೆ ದೊಡ್ಡಣ್ಣ ಮುಂರಾದವರು ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಸ್ಥಾನದಲ್ಲಿ ಸಭೆ ಸೇರಿ ನಮ್ಮ ಜನಾಂಗದ ಏಳಿಗೆ ವಿದ್ಯಾ ಪ್ರಗತಿಗಳಾಗಿ ಒಂದು ಸಂಘ ಕಟ್ಟಲು ಯೋಚಿಸಿದರು. ಆ ಸಭೆಗೆ ದಯಮಾಡಿಸಿದ್ದ ಸರ್ಕಾರದ ಉನ್ನತ ಅಧಿಕಾರಿಗಳಾದ ಶ್ರೀ ಕೆ.ಹೆಚ್.ರಾಮಯ್ಯ, ಬಿ.ಎ.ಬಾರ್ ಅಟ್ ಲಾರವರು ಸಂಘದ ಸ್ಥಾಪನೆಗೆ ಹುರಿದುಂಬಿಸಿ ವಿದ್ಯೆಯಲ್ಲೇ ಅಲ್ಲದೇ, ದೇವಾಂಗದವರು ತಮ್ಮ ಕುಲ ಕಸುಬಿನಲ್ಲೂ ಮುನ್ನಡೆ ಸಾಧಿಸಬಹುದೆಂದು ತಿಳಿಸಿ ತಮ್ಮ ಒಕ್ಕಲಿಗರ ಸಂಘ ಸ್ಥಾಪನೆಯಿಂದ ಜನಾಂಗದವರು ವಿದ್ಯೆಯಲ್ಲಿ ಮುಂದುವರಿದು ಉದಾಹರಣೆಗಳನ್ನು ನೀಡಿದರು.
1921 ರಲ್ಲಿ ಗುಂತಕಲ್ಲಿನ ರಾಯ್ ಸಾಹೇಬ್ ಎಂ.ಹಂಪಯ್ಯನವರು ದೇವಾಂಗ ಸಂಘ ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದಲ್ಲಿ ನಮ್ಮವರೂ ಮುನ್ನಡೆಯಲು ಅವಕಾಶವಾಗುತ್ತೆಂದು ಶ್ರೀ ಮರಡಿ ಸುಬ್ಬಯ್ಯವನರಲ್ಲಿ ಆಸಕ್ತಿ ಕೆರಳಿಸಿದರು.ಜನಾಂಗದವರಲ್ಲಿ ಒಮ್ಮತ ಸಾಧಿಸಲು ದೇವಾಂಗ ಮಹಾ ಸಭೆ ಕರೆಯಲು ಜನಾಂಗದವರಿಂದ ರೂ.1502/- ವಸೂಲು ಮಾಡಲಾಯಿತು. ಅದರೆ ಸಂಘ ಸ್ಥಾಪಿಸುವಲ್ಲಿ ವಿಫಲವಾಯಿತು. 1922 ರಲ್ಲಿ ಎಂ.ಹಂಪಯ್ಯ ನವರು ದೇವಾಂಗ ಸಂಘ ಸ್ಥಾಪನೆಗೆ ಒತ್ತಾಯ ಪಡಿಸಿ ಶ್ರೀ ಡಿ.ಎ.ಆದಿನಾರಾಯಣ ರವರು ಕಾರ್ಯದರ್ಶಿ ಯಾಗಿರಬೇಕೆಂದು ಸೂಚಿಸಿದರು.
ಮೈಸೂರು ಸಂಸ್ಥಾನದಲ್ಲಿ ದೇವಾಂಗ ಸಮಾಜದ ಇತಿಹಾಸದಲ್ಲಿ 1923 ಡಿಸೆಂಬರ್ 23ನೇ ತೇದಿ ಚಿರಸರಣೀಯ ದಿನ. ಬೆಂಗಳೂರು ನಗರದಲ್ಲಿ ಶ್ರೀ ಡಿ.ಸಿ.ಸುಬ್ಬರಾಯಪ್ಪನವರ ಅಧ್ಯಕ್ಷತೆಯಲ್ಲಿ ದೇವಾಂಗ ಸಮಾಜದ ಹಿರಿಯ ವ್ಯಕ್ತಿಗಳು ಸೇರಿ ಸಭೆಯಲ್ಲಿ ದೇವಾಂಗ ಜನಾಂಗದ ಸ್ಥಿತಿಗತಿಗಳನ್ನು ಸುಧಾರಿಸಲು ದೇವಾಂಗ ಸಂಘವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿ ಶ್ರೀಗಳಾದ ಕೆ.ವಿ.ನಂಜಪ್ಪ, ಕೆ.ಎನ್.ರಾಮ, ಡಿ.ಎ.ಆದಿನಾರಾಯಣ ಮತ್ತು ಕೆ.ಎನ್.ವೀರಭದ್ರಯ್ಯ ಇವರಿರುವ ಒಂದು ಉಪಸಮಿತಿ ರಚಿಸಿ ಸಂಘದ ಉದ್ದೇಶ, ನಿಬಂಧನೆಗಳನ್ನು ತಯಾರಿಸಿ ಸಲ್ಲಿಸುವಂತೆ ಆದೇಶ ನೀಡಲಾಯಿತು. ನೇಮಿತ ಪಸಮಿತಿ ರಚಿಸಿದ ಕರಡು ನಿಬಂಧನೆಗಳ ಆದಾರದ ಮೇಲೆ ದೇವಾಂಗ ಸಂಘ 12-2-1924 ರಲ್ಲಿ (1904ನೇ ಇಸವಿಯ ಮೈಸೂರು 3ನೇ ಕಾನೂನು ಪ್ರಕಾರ) ನೊಂದಾಯಿಸಲಾಯಿತು. ಕರಡು ನಿಬಂಧನೆಯ ದಸ್ಕತ್ತಿಗೆ ಶ್ರೀಗಳಾದ ಮರಡಿ ಸುಬ್ಬಯ್ಯ, ಹೊಸಮನೆ ಕೆಂಚಪ್ಪ, ಕೆ.ವಿ.ವೀರಭದ್ರಯ್ಯ. ಡಿ.ಆದೆಪ್ಪ, ಡಿ.ತಾರಗಿರಿಯಪ್ಪ, ಸಿ ಚಿಕ್ಕವೆಂಕಟಪ್ಪ, ಸಿ.ಕೆ.ಹುಚ್ಚಪ್ಪ, ಎನ್.ಪಿ.ಗುರಪ್ಪ, ಡಿ.ಸಿ.ಸುಬ್ಬರಾಯಪ್ಪ, ಡಿ.ಕಾವೇಟಪ್ಪ, ಯ|| ಮಹಡಿಮನೆ ಶಂಕರಪ್ಪ, ಕೆ.ಎನ್.ರಾಮಚಂದ್ರಯ್ಯ, ಕೆ.ವಿ ನಂಜಪ್ಪ, ಸಪ್ಪೆ ವೈ.ನರಸಿಂಹಣ್ಣ, ಪಿ.ಸುಬ್ರಮಣ್ಯಶಾಸ್ತ್ರಿ, ಗಂಟೆ ದೊಡ್ಡಣ್ಣ, ಕೆ.ಆರ್.ಚೌಡಪ್ಪ ಮತ್ತು ಎಂ.ಹಂಪಯ್ಯ ವರು ಸಹಿ ಮಾಡಿರುತ್ತಾರೆ.
ಸಂಘದ ಮೂಲ ಧ್ಯೇಯಗಳು:-
1) ದೇವಾಂಗ ಮತಸ್ಥರು ವಿದ್ಯಾವಂತರಾಗಿ ಅಭಿವೃದ್ಧಿಗೆ ಬರುವುದು. 2) ತಮ್ಮ ಕಸುಬನ್ನು ಉತ್ತಮ ರೀತಿಯಲ್ಲಿ ನಡೆಸಿ ಸಂಪದನಾಶಕ್ತಿ ಹೆಚ್ಚಿಸಿಕೊಂಡು ನೆಮ್ಮದಿಯಿಂದ ಬಾಳುವುದು. 3) ಪೌರ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸರಕಾರಿ ಅಧಿಕಾರಿಗಳಲ್ಲೂ ಭಾಗವಹಿಸಿ ದೇಶಸೇವೆಯಲ್ಲಿ ನಿರತರಾಗುವುದು. 4) ತಮ್ಮೊಳಗೆ ಪರಸ್ಪರ ಮೈತ್ರಿ ವೃದ್ಧಿ ಮಾಡಿ ಎಲ್ಲ ತೆರನ ಏಳಿಗೆಗೆ ಬರುಲು ಸಾಧಕವಾದ ಎಲ್ಲ ಚಟುವಟಿಕೆಗಳಿಗೂ ಬೆಂಬಲ ಒತ್ತಾಸೆ ಕೊಡುಗೆ.
ಈ ಸಂಘ ನೊಂದಾವಣೆಯ 2 ವರ್ಷಗಳ ಮುನ್ನ ಜನಾಂಗದವರಿಂದ ವಸೂಲಾಗಿದ್ದ ಸುಮಾರು ರೂ.1502/- ಸಂಘದ ಮೂಲಧನವಾಯಿತು.
ಸಂಘದ ಮೊಟ್ಟಮೊದಲ ಆಡಳಿತ ಮಂಡಳಿಯಲ್ಲಿ ಈ ಕೆಳಕಂಡ ಮಹನೀಯರಿದ್ದರು. ಶ್ರೀಗಳಾದ ರಾವ್ ಸಾಹೇಬ್ ಶ್ರೀ ಎಂ. ಹಂಪಯ್ಯ, (ಅಧ್ಯಕ್ಷರು), ಮರಡಿ ಸುಬ್ಬಯ್ಯ ಹೊಸಮನೆ ಬನಪ್ಪ, ಡಿ.ಆದೆಪ್ಪ (ಉಪಾಧ್ಯಕ್ಷರುಗಳು), ಡಿ.ಎ. ಆದಿನಾರಾಯಣ (ಕಾರ್ಯದರ್ಶಿ), ಬಿ.ಆರ್. ರಾಮಲಿಂಗಯ್ಯ ಎಂ.ಎ, ಬಿ.ಎಲ್.(ಜಂಟಿಕಾರ್ಯದರ್ಶಿ), ಸಿ. ಚಿಕ್ಕವೆಂಕಟಪ್ಪ (ಖಜಾಂಚಿ), ಕೆ.ಆರ್. ಚೌಡಪ್ಪ, ವೈ.ಎಸ್.ನರಸಿಂಹಣ್ಣ (ಲೆಕ್ಕಶೋಧಕರು), ಸದಸ್ಯರಾಗಿ, ಡಿ.ಸಿ. ಸುಬ್ಬರಾಯಪ್ಪ, ಬಿ.ಎ, ಬಿ.ಎಲ್., ಯ|| ಮಹಡಿಮನೆ ಶಂಕರಪ್ಪ, ಬಿ. ಕಾವೇಟಪ್ಪ, ಸಿ.ಕೆ. ಹುಚ್ಚಪ್ಪ, ಯ|| ಅನ್ನದಾನಪ್ಪ, ನೀಲಪ್ಪನವರ ದಾಸಪ್ಪ, ವೈ.ಹಚ್. ವೆಂಕಟರಮಣಪ್ಪ, ಡಿ. ತಾರಿಗಿಯಪ್ಪ, ಶ್ಯಾಂಪೂರ್ ಪಾಪಣ್ಣ, ಜಿ.ಶಾಮಣ್ಣ, ಹಂಟೆ ದೊಡ್ಡಣ್ಣ, ಕೆರಮಲ ಚಿಕ್ಕವೀರಭದ್ರಯ್ಯ, ಅಮ್ಮಿ ಚಿಕ್ಕ ತಿಮ್ಮಶೆಟ್ಟಪ್ಪ, ಎಂ.ಎಲ್.ರಂಗಪ್ಪ, ಪೌ|| ಡಿ.ರಾಮಯ್ಯ, ಎಂ.ಟಿ.ರಂಗಯ್ಯ ಬಿನ್ ಅಣ್ಣಯ್ಯಪ್ಪ ಊಡೇದ ಬನಪ್ಪ ಬೇವಿನ ಮರದ ಮುದ್ದಪ್ಪ, ಶೀರ್ಯದ ಪುಟ್ಟಪ್ಪ, ಶೀರ್ಯದ ಆಂಜನಪ್ಪ, ಡಾ|| ಡಿ. ಎಸ್. ಪುಟ್ಟಣ್ಣ, ಬಿ.ಎ.,ಎಂ.ಬಿ.ಸಿ.ಎಂ., ಎಫ್.ಆರ್.ಸಿ.ಎಸ್, ಎಣ್ಣೆಗೆರೆ ಚಿಕ್ಕವೆಂಕಟಪ್ಪ,ಯ|| ಚೀಣಾ ಅಂಗಡಿ ರಾಮಯ್ಯು, ಶೆಟ್ಟಿ ತಿಮ್ಮಪ್ಪ, ತಮ್ಮಯ್ಯ, ಶೆಟ್ಟಿ ಗವೇರಂಗಪ್ಪ, ವಾಜರಹಳ್ಳಿ ಚಿಕ್ಕಬನಪ್ಪ, ಬಿ.ಮುರುಡಪ್ಪ, ಚಿಕ್ಕಣ್ಣನವರ ತ್ಯಾರಮಲ್ಲಪ್ಪ,ದೊಮ್ಮಸಂದ್ರದ ಗಿರಿಯಪ್ಪ, ವಿ.ರಾಮಲಿಂಗಪ್ಪ, ಜಡೆ ಹನುಮಂತಪ್ಪ, ಬಿನ್ ಅಣ್ಣಯ್ಯಪ್ಪ, ಅಮಾವಾಸ್ಯೆ ಶ್ರೀಕಂಠಪ್ಪ, ಅಮಾವಾಸೆಯ ಭೋಗನಂಜುಂಡಪ್ಪ, ಹಣಬೆ ಶ್ರೀಕಂಠಪ್ಪ, ವೆಂಕಟಪ್ಪನವರ ಮಕ್ಕಳು ದಾಸಪ್ಪ, ಬಿ.ವೆಂಕಟರಮಣಪ್ಪ, ಶೆಟ್ಟರ ವೆಂಕಟರಮಣಪ್ಪ, ಸಿ.ಎಸ್.ತಮ್ಮಯ್ಯ, ಬಿ.ಕಾಳಪ್ಪ, ಶೆಟ್ಟರು ಕಾಡು ಬಸವಯ್ಯ, ಬೇವಿನ ಮರದ ಲಿಂಗಪ್ಪ, ಬಿಕ್ಕವೆಂಕಟಪ್ಪ, ಬ್ಯಾಟಪ್ಪ. ಮಹನೀಯರ ತ್ಯಾಗ, ಧನಸಹಾಯ, ಮಾರ್ಗದರ್ಶನಗಳ ಫಲವಾಗಿ ಸಂಘ ಸನ್ಮಾರ್ಗದಲ್ಲಿ ಸುಸೂತ್ರವಾಗಿ ಮುನ್ನಡೆಯಿತು. 1943 ರಲ್ಲಿ ದೇವಾಂಗ ಜನಾಂಗದ ಪ್ರತಿಷ್ಠಿತ ವ್ಯಕ್ತಿಗಳಾದ ಶ್ರೀಯುತ ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪನವರ ಮಗ ವೆಂಕಟಪ್ಪ (ಪತಿಯಪ್ಪ)ನವರು ಸಂಪಿಗೆ ಹಳ್ಳಿಯಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ 1 ಎಕರೆ 32 ಗುಂಟೆ ಜಮೀನನ್ನು ದೇವಾಂಗ ಸಂಘಕ್ಕೆ ದಾನವಾಗಿ ಬರೆದರು.ಅದರಲ್ಲಿ 1119 ಚದರಗಜ ಚಿಂತಾಮಣಿ ತಿಪ್ಪಯ್ಯನವರಿಗೆ ಅವರ ತಂದೆಯವರು ನೀಡಿದ್ದರು. ಉಳಿದ ಜಾಗದಲ್ಲಿ ಸಮಾಜದವರು ದೇವಾಂಗ ಜನಾಂಗದ ವಿದ್ಯಾಭಿವೃದ್ಧಿಗಾಗಿ ಪರಸ್ಥಳದಿಂದ ಬರುವ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ದೇವಾಂಗ ಹಾಸ್ಟಲ್ ನ್ನು ಕಟ್ಟಿಸಿದರು. ಇದಕ್ಕೆ ಮೊದಲು ಪರಸ್ಥಳದಿಂದ ಬಂದ ವಿದ್ಯಾರ್ಥಿಗಳಿಗೆ ಧರ್ಮ ಪ್ರಕಾಶ್ ಎನ್.ದಾಸಪ್ಪನವರ ಮನೆಯಲ್ಲಿ ಮರಡಿ ಸುಬ್ಬಯ್ಯನವರ ಮನೆಯಲ್ಲಿ, ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪ(ಪತಿಯಪ್ಪ) ನವರುಗಳ ಮನೆಯಲ್ಲಿ ಹೊಸಮನೆ ಕೆಂಚಪ್ಪನವರ ಮೆನಯಲ್ಲಿ, ಆಂಧ್ರ ದೇವಾಂಗ ಜನಾಂಗದ ಹಲವಾರು ಹಿರಿಯರ ಮನೆಗಳಲ್ಲಿ ಊಟ ವಸತಿ ಸೌಕರ್ಯ ಕಲ್ಪಿಸಿದ್ದು ಶಿಕ್ಷಣ ಅವರುಗಳ ಪ್ರಯತ್ನದ ಫಲವಾಗಿ ದೇವಾಂಗ ಹಾಸ್ಟಲ್ ಕಟ್ಟಡವನ್ನು ಕಟ್ಟಿ ಪರಸ್ಥಳದಿಂದ ಬರುವ ನೂರಾರು ಜನ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದರು.
1930 ರಲ್ಲಿ ಆಂಧ್ರ ದೇವಾಂಗ ಸಂಘವು ಸ್ಥಾಪನೆಯಾಗಿ ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆಯನ್ನು ಕೊಡಲು ಪ್ರಾರಂಭಿಸಿತು. ದೇವಾಂಗ ಜನಾಂಗವು ಮದುವೆ ಶುಭ ಸಮಾರಂಭಗಳಿಗಾಗಿ ದೇವಾಂಗ ಸಂಘ 25 ವರ್ಷದ ಜ್ಞಾಪಕಾರ್ಥವಾಗಿ ಕಲ್ಯಾಣ ಮಂಟಪ್ಪವನ್ನು ಕಟ್ಟಿಸಿ ದೇವಾಂಗ ಸಂಘ ರಜತ ಮಹೋತ್ಸವ ಭವನ ಎಂದು ಹೆಸರು ಇಡಲಾಯಿತು. 50ನೇ ವರ್ಷದ ಜ್ಞಾಪಕಾರ್ಥವಾಗಿ ನೂತನ ವಿದ್ಯಾರ್ಥಿ ಭವನವನ್ನು ಕಟ್ಟಿಸಲಾಯಿತು. 60ನೇ ವರ್ಷದ ಜ್ಞಾಪಕಾರ್ಥವಾಗಿ ಪತಿಯಪ್ಪ ಭವನ ಕಟ್ಟಲಾಯಿತು. 75ನೇ ವರ್ಷದ ಜ್ಞಾಪಕಾರ್ಥವಾಗಿ ದೇವಾಂಗ ಸಂಘ ಅಮೃತ ಮಹೋತ್ಸವ ಭವನ ಶಾಲಾ ಕಟ್ಟಡವನ್ನು ಕಟ್ಟಲಾಯಿತು.
ದೇವಾಂಗ ಸಂಘವು ಸಾರ್ವಜನಿಕರಿಗೆ ಶಿಕ್ಷಣ ನೀಡುವ ಸಲುವಾಗಿ 1980 ರಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢಶಾಲೆಗಳನ್ನು ನಡೆಸಿಕೊಂಡು ಬರುತ್ತಿದೆ. 2001 ರಲ್ಲಿ ಪದವಿ ಪೂರ್ವ ನಂತರ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಸುಲಭ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ದೇವಾಂಗ ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ದೇವಾಂಗ ಸಂಘದ ಬೆಳವಣಿಗೆಗೆ ಪೂರ್ವಜರು ನೀಡಿರುವ ಕೊಡುಗೆಗಳು ಅಪಾರವಾದ ಬೆಲೆಯುಳ್ಳದ್ದಾಗಿದೆ.
1939ರಲ್ಲಿ ಕೆಂಪೇಗೌಡ ರಸ್ತೆಯ ಹೊಸ ಜೈಲು ಬಡಾವಣೆಯಲ್ಲಿ ಸೈಟು ಕೊಂಡು ದೇವಾಂಗ ಬ್ಯಾಂಕ್ ಸ್ಥಾಪಿಸಲಾಯಿತು.ವಿಜಯ ಬ್ಯಾಂಕ್ ವಿಲೀನವಾದ ಮೇಲೆ ಟೆಕ್ಸ್ ಟೈಲ್ ಕೋ-ಆಪರೇಟಿವ್ ಬ್ಯಾಂಕನ್ನು ನೇಕಾರರಿಗಾಗಿ ಜುಮ್ಮಾ ಮಸೀದಿ ರಸ್ತೆ, ದೇವಾಂಗ ಮಾರ್ಕೆಟ್ ಕಟ್ಟಡದಲ್ಲಿ ಸ್ಥಾಪಿಸಲಾಯಿತು. ದೇವಾಂಗ ಸಂಘವು ಈ ಎಲ್ಲಾ ಆದಾಯ ವೆಚ್ಚಗಳಿಗೆ ಕ್ರಮಬದ್ಧವಾಗಿ ಲೆಕ್ಕಪತ್ರಗಳನ್ನು ಇಟ್ಟು ಸರ್ವಸದಸ್ಯರ ಸಭೆಗಳನ್ನು ನಡೆಸಿಕೊಂಡು ಸದಸ್ಯರ ಮನ್ನಣೆಗೆ ಪಾತ್ರವಾಗಿದೆ.
ದೇವಾಂಗ ಸಂಘವು 1972ರಲ್ಲಿ ಅಖಿಲ ಕರ್ನಾಟಕ ಪ್ರಥಮ ಸಮ್ಮೇಳನ ಯಶಸ್ವಿಯಾಗಿ ನಡೆಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಪುನರುಜ್ಜೀವನಕ್ಕೆ ಶ್ರಮಿಸಲು ದೃಢ ಸಂಕಲ್ಪ ಮಾಡಿದ್ದು ಉತ್ತರ ಕರ್ನಾಟಕ ದಾನ ವೀರ ಶ್ರೀಮಂತ ವೆಂಕಟಪ್ಪನವರು, ವಾಸಪ್ಪಸಕ್ರಿರವರು, ಅಖಿಲ ಭಾರತ ದೇವಾಂಗ ಸಮಾಜದ ಅಧ್ಯಕ್ಷರು ಎಫ್.ಎಂ.ಭಾರದ್ವಾಜ್ ರವರು, ಗದಗ್ ಬೆಟ್ಟಗೆರಿಯ ನಾರಾಯಣಪ್ಪ ಅರಳಿಕಟ್ಟಿರವರು, ಬೆಳಗಾಂನ ಹಿರಿಯರೆಲ್ಲರನ್ನು ಒಗ್ಗೂಡಿಸಿ ಶ್ರಮಪಟ್ಟು 1980ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಕರ್ನಾಟಕ ಎರಡನೇ ಸಮ್ಮೇಳನದಲ್ಲಿ ದೇವಾಂಗ ಸಂಘದ ಅಧ್ಯಕ್ಷರಾಗಿದ್ದು ಧರ್ಮಪ್ರಕಾಶ್, ಎನ್.ದಾಸಪ್ಪನವರ ಸುಪುತ್ರರಾದ ಡಿ ಹನುಮಂತಪ್ಪನವರು, ಸಮಾಜ ಸೇವಾ ಧುರೀಣ ವೈ.ಎಚ್.ವೆಂಕಡರಮಣಪ್ಪ ನವರ ಸುಪುತ್ರ ವೈ.ವಿ.ತಿಮ್ಮಯ್ಯನವರು, ದೇವಾಮಗ ಭೂಷಣ ಶ್ರೀ ಬಿ.ಜಿ.ವೀರಣ್ಣ ವರುಗಳ ಪ್ರಯತ್ನದ ಫಲವಾಗಿ ಶ್ರೀ ಗಾಯತ್ತಿ ಪೀಠ ಮಹಾಸಂಸ್ಥಾನದ ಆಸ್ತಿಯು ಸಮಾಜದವರ ಕೈಗೆ ಬಂದಿತು. ಇದಕ್ಕಾಗಿ ಒಂದು ಟ್ರಸ್ಟ್ ನ್ನು ಸ್ಥಾಪಿಸಿ ಅದಕ್ಕೆ ವರ್ಗಾಯಿಸಲಾಯಿತು. ಬೆಂಗಳೂರು ನಗರದ ಕೆಂಚೇನಹಳ್ಳಿ ರಾಜರಾಜೇಶ್ವರಿ ಪೀಠ ಮಹಾ ಸಂಸ್ಥಾನಾಧೀಶ್ವರ ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳ ಆಶೀರ್ವಾದದಲ್ಲಿ ತಯಾರಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರನ್ನು 1990ರಲ್ಲಿ ಪೀಠಾಧಿಪತಿಗಲಾಗಿ ಪಟ್ಟಾಭಿಷೇಕ ಮಾಡಲಾಯಿತು.
ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನ ದೇವಾಂಗ ಸಂಘದ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ ಬೆಂಗಳೂರು ಮಹಾನಗರದ ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಂತರ ಶ್ರೀಯುತ ಸ.ಸೂರ್ಯನಾರಾಯಣ್ರವರ ಅಧ್ಯಕ್ಷತೆಯಲ್ಲಿ ಕೆ.ಜಿ.ರಸ್ತೆಯಲ್ಲಿರುವ ಸಮಾಜದ ಬಹು ನಿರೀಕ್ಷಿತ ಕನಸಿನ ಕೂಸು ಆದಂತಹ ದೇವಾಂಗ ಟವರ್ ವಾಣಿಜ್ಯ ಕಟ್ಟಡ ನಿರ್ಮಾಣವಾಯಿತು, ದೇವಾಂಗ ಹಾಸ್ಟಲ್ ರಸ್ತೆಯಲ್ಲಿರುವ ನಮ್ಮ ಜನಾಂಗದ ಮಹಾನ್ ದಾನಿಗಳಾದ ಶ್ರೀಯುತ ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪನವರ ಮಗ ವೆಂಕಟಪ್ಪ (ಪತಿಯಪ್ಪ)ನವರ ಹೆಸರಿನ ಪತಿಯಪ್ಪ ಟವರ್ ವಾಣಿಜ್ಯ ಕಟ್ಟಡ ನಿರ್ಮಾಣವಾಯಿತು. ನಂತರ ಅಧ್ಯಕ್ಷರಾದ ಡಾ|| ಜಿ.ರಮೇಶ್ ಎಂ.ಎ., ಪಿ.ಹೆಚ್.ಡಿ., ಐಪಿ.ಎಸ್. ಡಿ.ಐಜಿ.(ನಿವೃತ್ತ)ರವರ ನೇತೃತ್ವದಲ್ಲಿ ದೇವಾಂಗ ಸಂಘದ ಆಡಳಿತ ಕಛೇರಿ, ದೇವಾಂಗ ಸಂಘದ ಛತ್ರಗಳು ಹಾಗೂ ದೇವಾಂಗ ಹಾಸ್ಟೆಲ್ ಕಟ್ಟಡವನ್ನು ನವೀಕರಣಗೊಳಿಸಲಾಯಿತು. ನಂತರ ಅಪೂರ್ಣಗೊಂಡಿದ್ದ ನೂತನ ಕಾಲೇಜು ಕಟ್ಟಡವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ 3 ವರ್ಷದ ಕಾನೂನು ಪದವಿ ತರಗತಿಗಳನ್ನು ಪ್ರಾರಂಭಿಸಲಾಗಿದ್ದು ಈಗಾಗಲೇ ತರಗತಿಗಳು ನಡೆಯುತ್ತಿದ್ದು 5 ವರ್ಷದ ಬಿ.ಕಾಂ., ಎಲ್.ಎಲ್.ಬಿ.ಗೆ ಸರ್ಕಾರದ ಅನುಮತಿ ದೊರೆತಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ 5 ವರ್ಷದ ಕಾನೂನು ಪದವಿ ತರಗತಿಗಳು ಪ್ರಾರಂಭಿಸಲಾಗುತ್ತದೆ. ನೂತನ ಮಹಿಳಾ ಹಾಸ್ಟೆಲ್ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಮಹಾನ್ ದಾನಿಗಳಾದ ಶ್ರೀಯುತ ಎಣ್ಣೆಗೆರೆ ಯಜಮಾನ್ ಚಿಕ್ಕವೆಂಕಟಪ್ಪನವರ ಮಗ ವೆಂಕಟಪ್ಪ (ಪತಿಯಪ್ಪ) ಹಾಗೂ ಶ್ರೀಮತಿ ಪಿಳ್ಳಮ್ಮನವರ ಸ್ಮಾರಕ ಮಂಟಪ ನಿರ್ಮಾಣ ಮಾಡಲಾಯಿತು.
,ಸ್
ಸ್ಥಿರ ಆಸ್ತಿಗಳು
ಅ) ಎಣ್ಣೆಗೆರೆ ಯಜಮಾನ್ ವೆಂಕಟಪ್ಪನವರು ನೀಡಿದ ಜಮೀನು.
ಆ) ಗವಿಪುರದ ಹತ್ತು ಮಂದಿ ಛತ್ರ
ಇ) ದೇವಾಂಗ ಮಾರ್ಕೆಟ್
ಈ) ಕೆಂಪೇಗೌಡ ರಸ್ತೆಯಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್